ಜಾಮೀನು 1

	ಕ್ರಿಮಿನಲ್ (ಫೌಜದಾರಿ) ಅಥವಾ ಸಿವಿಲ್ (ದಿವಾನಿ) ವಿಷಯವೊಂದರ ಸಂಬಂಧವಾಗಿ ಬಂಧಿತನಾಗಿರುವವನೊಬ್ಬನನ್ನು, ಆ ವಿಷಯ ಕುರಿತು ಮುಂದಿನ ಕ್ರಮ ಜರುಗಿಸುವಾಗ ನಿಶ್ಚಿತವಾದ ದಿನ ನಿಶ್ಚಿತವಾದ ಸ್ಥಳದಲ್ಲಿ ಅವನು ನ್ಯಾಯಾಲಯದಲ್ಲಿ ಹಾಜರಾಗತಕ್ಕದ್ದೆಂಬ ಷರತ್ತಿನ ಮೇಲೆ, ನ್ಯಾಯಾಧೀಶ (ಜಡ್ಜ್) ಅಥವಾ ದಂಡಾಧೀಶ (ಮ್ಯಾಜಿಸ್ಟ್ರೇಟ್) ಬಿಡುಗಡೆ ಮಾಡಲು ನ್ಯಾಯಾಲಯಕ್ಕೆ ನೀಡಬೇಕಾಗುವ ಭರವಸೆ (ಬೇಲ್). ಜಾಮೀನು ನೀಡುವ ವ್ಯಕ್ತಿಯನ್ನು ಜಾಮೀನುದಾರ ಎಂದು ಕರೆಯುತ್ತಾರೆ; ಜಾಮೀನು ಎಂದೇ ಕರೆಯುವುದುಂಟು. ಜಾಮೀನು ಸಹಜನ್ಯಾಯ ತತ್ತ್ವವನ್ನು ಆಧರಿಸಿದೆ. ಅಪರಾಧ ಸಿದ್ಧಪಡುವ ತನಕ ಅಪರಾಧಿಯನ್ನು ನಿರಪರಾಧಿಯೆಂದೇ ಭಾವಿಸಬೇಕು. ಅವನಿಗೆ ತನ್ನ ವಿರುದ್ಧ ಮಾಡಲಾದ ಆರೋಪವನ್ನು ಅಲ್ಲಗಳೆಯಲು ಸಾಕಷ್ಟು ಅವಕಾಶ ನೀಡಬೇಕು. ಅಪರಾಧದ ವಿಚಾರಣೆ ನಡೆದಾಗ ಬಂಧಿತರೆಲ್ಲರನ್ನೂ ಬಂದೀಖಾನೆಯಲ್ಲಿರಿಸುವುದು ನ್ಯಾಯವಾದುದಲ್ಲ ಮತ್ತು ವ್ಯಾವಹಾರಿಕವೂ ಅಲ್ಲ. ಜಾಮೀನಿನ ಮೇಲೆ ಆರೋಪಿಯನ್ನು ಬಿಡುಗಡೆ ಮಾಡುವುದು ನ್ಯಾಯಿಕ ಸಂಪ್ರದಾಯ. ಪ್ರಾಚೀನ ಕಾಲದಲ್ಲಿ ಈ ಪದ್ಧತಿ ಬಳಕೆಯಲ್ಲಿತ್ತು ಎಂಬುದಕ್ಕೆ ಹೆಚ್ಚಿನ ಆಧಾರಗಳಿಲ್ಲ.
ಶಿಕ್ಷಾರ್ಹ ಅಪರಾಧಗಳನ್ನು ಜಾಮೀನುಯೋಗ್ಯ ಅಪರಾಧಗಳು ಮತ್ತು ಜಾಮೀನುಯೋಗ್ಯವಲ್ಲದ ಅಪರಾಧಗಳು ಎಂದು ಎರಡು ಬಗೆಯಾಗಿ ವಿಂಗಡಿಸಲಾಗಿದೆ. ಮೋಸ, ಲಂಚ ಸ್ವೀಕಾರ, ಚುನಾವಣಾ ಅಪರಾಧಗಳು ಮೊದಲಾದ ಜಾಮೀನುಯೋಗ್ಯ ಅಪರಾಧಗಳಿಗೆ ಸಂಬಂಧಿಸಿದ ವ್ಯವಹರಣೆಗಳಲ್ಲಿ (ಪ್ರೊಸೀಡಿಂಗ್ಸ್) ಆರೋಪಿಗೆ ಜಾಮೀನು ಕೇಳುವ ಅಧಿಕಾರವುಂಟು. ಆರೋಪಿಯೋಗ್ಯ ಜಾಮೀನು ಒದಗಿಸಲು ಸಿದ್ಧನಿದ್ದರೆ ಅವನಿಂದ ಜಾಮೀನು ತೆಗೆದುಕೊಂಡು ಅವನನ್ನು ಬಿಡುಗಡೆ ಮಾಡಬೇಕಾದ್ದು ನ್ಯಾಯಾಲಯದ ಕರ್ತವ್ಯ. ಇಂಥ ಸಂದರ್ಭದಲ್ಲಿ ನ್ಯಾಯಾಲಯ ತನ್ನ ವಿವೇಚನೆಗೆ ಹೊಳೆದಂತೆ ಮಾಡಲವಕಾಶವಿಲ್ಲ. ಆದರೆ ಜಾಮೀನುಯೋಗ್ಯವಲ್ಲದ ಅಪರಾಧಗಳ ಸಂಬಂಧದಲ್ಲಿ ಜಾಮೀನು ಪಡೆಯುವುದು ಅಥವಾ ಬಿಡುವುದು ನ್ಯಾಯಾಲಯದ ವಿವೇಚನೆಗೆ ಸೇರಿದ ವಿಷಯ. ಕೊಲೆ, ದರೋಡೆ, ಸುಲಿಗೆ, ಕಳವು, ಬಂಡಾಯ ಮೊದಲಾದ ಘೋರ ಅಪರಾಧಗಳು ಜಾಮೀನುಯೋಗ್ಯವಲ್ಲದ ಅಪರಾಧಗಳೆನಿಸುವುವು. ಆದರೆ ಕೆಲವೊಂದು ಸಂದರ್ಭಗಳಲ್ಲಿ, ಎಂದರೆ ಸಾಕಷ್ಟು ಪ್ರಬಲವಾದ ಸಾಕ್ಷಿಯಿಲ್ಲದಾಗ, ಆರೋಪಿ ಹದಿನಾರು ವರ್ಷಗಳಿಗಿಂತ ಚಿಕ್ಕ ವಯಸ್ಸಿನವನಿರುವಾಗ, ಮಹಿಳೆಯಾಗಲಿ ಅತಿವೃದ್ಧನಾಗಲಿ ರೋಗಪೀಡಿತನಾಗಲಿ ಆಗಿರುವಾಗ ಅಥವಾ ಇಂಥವೇ ಬೇರೆ ಕಾರಣಗಳಿಗಾಗಿ ಯೋಗ್ಯ ಜಾಮೀನಿನ ಮೇಲೆ ಆರೋಪಿಯನ್ನು ನ್ಯಾಯಾಲಯ ಬಿಡುಗಡೆ ಮಾಡಬಹುದು. ಹೀಗೆ ಬಿಡುಗಡೆ ಆಜ್ಞೆ ನೀಡುವ ನ್ಯಾಯಾಲಯ ತನ್ನ ಹುಕುಮಿನಲ್ಲಿ ಜಾಮೀನಿನ ಕಾರಣಗಳನ್ನು ಕೊಡಬೇಕಾಗುತ್ತದೆ. ಜಾಮೀನಿನ ನಿಡುಗಡೆ ನೀಡುವಾಗ ನ್ಯಾಯಾಲಯ ಸಾಮಾನ್ಯವಾಗಿ ಆರೋಪಿಯ ಪೂರ್ವಚರಿತ್ರೆ, ಅಪರಾಧದ ಸ್ವರೂಪ, ಅಪರಾಧ ಋಜುವಾಗುವ ಸಾಧ್ಯತೆ, ಆರೋಪಿ ಸಾಕ್ಷಿಯನ್ನು ಬಿಡಿಸುವ ಸಂಭವ, ಆರೋಪಿ ತಲೆಮರೆಸಿಕೊಳ್ಳುವ ಸಾಧ್ಯತೆ, ಅಪರಾಧಿಯ ವಯಸ್ಸು, ಲಿಂಗ ದೈಹಿಕ ಸ್ಥಿತಿ, ಜಾಮೀನುದಾರನ ಸಾಮಾಜಿಕ ಅಂತಸ್ತು, ವಿಚಾರಣೆಗೆ ಬೇಕಾಗಬಹುದಾದ ಅವಧಿ ಮೊದಲಾದ ಪ್ರಮುಖ ಅಂಶಗಳನ್ನು ಗಮನಿಸಬೇಕಾಗುತ್ತದೆ. ಇಂಥಿಂಥ ಕಾರಣಗಳ ಮೇಲೆಯೇ ಜಾಮೀನು ನೀಡಬೇಕೆಂಬ ನಿರ್ದಿಷ್ಟವಾದ ನಿಯಮ ಯಾವುದೂ ಇಲ್ಲ. ಪ್ರತಿ ಮೊಕದ್ದಮೆಯ ವಿದ್ಯಮಾನಗಳನ್ನೂ ದೃಷ್ಟಿಯಲ್ಲಿರಿಸಿಕೊಂಡು ಜಾಮೀನಿನ ವಿಚಾರವಾಗಿ ನ್ಯಾಯಾಲಯ ತೀರ್ಮಾನಕ್ಕೆ ಬರಬೇಕಾಗುತ್ತದೆ.

ಆರೋಪಿಯ ವಿಚಾರಣೆ ಮುಗಿಯುವ ಮುನ್ನ, ವ್ಯವಹರಣೆಯ ಯಾವ ಹಂತದಲ್ಲಾದರೂ ಅವನು ಜಾಮೀನು ಅರ್ಜಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ತನ್ನ ಶಪಥ ಪತ್ರದೊಂದಿಗೆ (ಆಫಿಡವಿಟ್) ಸಲ್ಲಿಸಬಹುದು. ನ್ಯಾಯಾಲಯ ಜಾಮೀನು ನೀಡುವಾಗ ಜಾಮೀನುದಾರನಿಂದ ಭದ್ರತೆಯ ಪತ್ರ ಬರೆಸಿಕೊಳ್ಳುತ್ತದೆ. ಕರಾರಿಗೆ ತಪ್ಪಿದರೆ ಜಾಮೀನುದಾರ ತಾನು ಸಮ್ಮತಿಸಿದ್ದ ಭರವಸೆಯ ಗಂಟನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗುತ್ತದೆ. ಜಾಮೀನುದಾರ ತನ್ನನ್ನು ಜಾಮೀನಿನಿಂದ ಮುಕ್ತನನ್ನಾಗಿ ಮಾಡಬೇಕೆಂದು ನ್ಯಾಯಾಲಯವನ್ನು ಕೇಳಬಹುದು. ಅವನು ಮುಕ್ತನಾದಾಗ ಬೇರೊಬ್ಬ ಜಾಮೀನುದಾರನನ್ನು ಆರೋಪಿ ಒದಗಿಸಿಬೇಕಾಗುತ್ತದೆ. ಅದಕ್ಕೆ ಅವನು ತಪ್ಪಿದರೆ ಅವನ ಜಾಮೀನು ರದ್ದಾಗಿ ಪುನಃ ಅವನು ಸೆರೆಮೆನೆ ಸೇರಬೇಕಾಗುತ್ತದೆ. ನ್ಯಾಯಾಲಯ ಕೆಲವು ವಿಶೇಷ ಸಂದರ್ಭಗಳಲ್ಲಿ ವೈಯಕ್ತಿಕ ಭದ್ರತೆಯ ಮೇಲೆ ಜಾಮೀನು-ಬಿಡುಗಡೆ ನೀಡಬಹುದು.

ವಿಚಾರಣಾ ನ್ಯಾಯಾಲಯ ಆರೋಪಿಗೆ ಜಾಮೀನು ನಿರಾಕರಿಸಿದರೆ ಅವನು ಸೆಷನ್ಸ್ (ಸತ್ರ) ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಜಾಮೀನು ಬೇಡಬಹುದು. ಅಲ್ಲಿ ಅವನ ಅರ್ಜಿ ತಿರಸ್ಕøತವಾದರೆ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು. ಅಲ್ಲೂ ಜಾಮೀನನ್ನು ನಿರಾಕರಿಸಿದರೆ ಆರೋಪಿ ಪರಮೋಚ್ಚ ನ್ಯಾಯಾಲಯಕ್ಕೆ ಹೋಗಲು ಕಾನೂನಿನಲ್ಲಿ ಅವಕಾಶವಿದೆ. ಸಾಮಾನ್ಯವಾಗಿ ಮೇಲಿನ ನ್ಯಾಯಾಲಯ ಕೆಳನ್ಯಾಯಾಲಯದ ತೀರ್ಪನ್ನು ತಳ್ಳಿಹಾಕಿ ಜಾಮೀನು ಒಪ್ಪಿಗೆ ನೀಡುವುದಿಲ್ಲ. ಜಾಮೀನು ನಿರಾಕರಿಸಿದಾಗ ನ್ಯಾಯಾಧೀಶ ಅದಕ್ಕೆ ಕಾರಣಗಳನ್ನು ತನ್ನ ತೀರ್ಪಿನಲ್ಲಿ ಕೊಡಬೇಕಾಗುತ್ತದೆ. ಅಪರಾಧ ಸಿದ್ಧಪಟ್ಟು ಶಿಕ್ಷೆಯನ್ನು ವಿಧಿಸಿದ ಮೇಲೆ ಅಪರಾಧಿ ಆ ತೀರ್ಪಿನ ವಿರುದ್ಧ ಮೇಲಿನ ನ್ಯಾಯಾಲಯಕ್ಕೆ ಅಪೀಲು (ಮೇಲರ್ಜಿ) ಸಲ್ಲಿಸಬಹುದು. ಅಪೀಲು ಸಲ್ಲಿಸಿದಾಗ ಅಪೀಲಿನ ಅವಧಿಯಲ್ಲಿ ತನ್ನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕೆಂದು ಅವನು ಅಪೀಲು ನ್ಯಾಯಾಲಯವನ್ನು ಪ್ರಾರ್ಥಿಸಬಹುದು. ಆ ನ್ಯಾಯಾಲಯ ಅಪರಾಧಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದು. ಜಾಮೀನಿನ ಮೇಲೆ ಬಿಡುಗಡೆ ಆಜ್ಞೆ ಮಾಡುವ ನ್ಯಾಯಾಲಯಕ್ಕೆ ಮತ್ತು ಉಚ್ಚ ನ್ಯಾಯಾಲಯಕ್ಕೆ, ನೀಡಿದ ಜಾಮೀನನ್ನು ರದ್ದುಗೊಳಿಸುವ ಅಂತರ್ಗತ ಅಧಿಕಾರವುಂಟು. ವಿಶೇಷ ಕಾರಣಗಳಿಗಾಗಿ ನ್ಯಾಯಾಲಯ ಜಾಮೀನು ರದ್ದುಪಡಿಸಬಹುದು. ಜಾಮೀನಿನ ಮೇಲೆ ಬಿಡುಗಡೆ ಮಾಡುವುದು ಅಥವಾ ಬಿಡುವುದು ವಿಶೇಷವಾಗಿ ನ್ಯಾಯಾಲಯದ ವಿವೇಚನೆಗೆ ಸೇರಿದ ವಿಷಯ.

	1973ರ ಭಾರತೀಯ ದಂಡಪ್ರಕ್ರಿಯಾ ಸಂಹಿತೆಯ 33ನೆಯ ಅಧ್ಯಾಯದಲ್ಲಿ ಜಾಮೀನಿನ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲಾಗಿದೆ.											(ಎ.ಪಿ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ